ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಮಿತ್ರ ವಾಟ್ಸಪ್‌ ಬಳಗದ ಯಕ್ಷ ಸತ್ಸಂಗ

ಲೇಖಕರು :
ಲಕ್ಷ್ಮಿ ಮಚ್ಚಿನ
ಗುರುವಾರ, ಜುಲೈ 2 , 2015

ವಾಟ್ಸಪ್‌! ತಿಂಗಳಿಗೆ 800 ಮಿಲಿಯ ಮಂದಿ ಉಪಯೋಗಿಸುವ ಪ್ರಭಾವೀ ಸಂವಹನ ಸಾಮಾಜಿಕ ಮಾಧ್ಯಮ. ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆದ ಘಟನೆ ಕ್ಷಣಾರ್ಧದಲ್ಲಿ ನಮ್ಮ ಮೊಬೈಲ್‌ ಪರದೆಯಲ್ಲಿ ಗೋಚರವಾಗುವಂತೆ ಮಾಡುವ ಕ್ಷಿಪ್ರ ಸಂವಹನಕಾರಿ ಮಾಧ್ಯಮ. ಇಂತಹ ಮಾಧ್ಯಮ ತಟಸ್ಥ , ಬಳಕೆಯ ಒಳಿತು - ಕೆಡುಕು ಬಳಸುವವರ ಕೈಯಲ್ಲಿದೆ. ವಾಟ್ಸಪ್‌ ಗ್ರೂಪ್‌ನ ಸದಸ್ಯರು ಒಟ್ಟು ಸೇರಿ ಮಾನವೀಯ ನೆರವನ್ನು ನೀಡಿದ, ಸಭೆ ಸೇರಿದ, ಟ್ರಕ್ಕಿಂಗ್‌ ಮಾಡಿದ, ಪಿಕ್ನಿಕ್‌ ಹೋದ ಉದಾಹರಣೆಗಳಿವೆ. ಅಂಥವುಗಳಲ್ಲೊಂದು ವಿಶಿಷ್ಟ , ಸರ್ವ ಪ್ರಥಮ - ವಾಟ್ಸಪ್‌ ಬಳಗದ ಮುನ್ನಲೆಯಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನ.

ವಾಟ್ಸಪ್‌ನಲ್ಲಿನ ರಾಜಕೀಯ, ಜೋಕು, ಹರಟೆ, ಪರನಿಂದೆಯ ನಡುವೆ ಕಣ್ಮನ ತಣಿಸಿ ಕಿವಿಗಿಂಪು ಮಾಡಿ ಹೃನ್ಮನ ನವಿರಾಗುವಂತೆ ಮಾಡುತ್ತಿದೆ ಯಕ್ಷಮಿತ್ರ ನಮ್ಮ ವೇದಿಕೆ ಎಂಬ ವಾಟ್ಸಪ್‌ ಗ್ರೂಪ್‌. ಯಕ್ಷಗಾನ ಈ ಭಾಗದ ಜನರ ನರನಾಡಿಗಳಲ್ಲಿ ಹರಿಯುತ್ತಿದೆ. ಯಕ್ಷಗಾನದ ಈ ನಾಡಿಮಿಡಿತ ಚೆಂಡೆಯ ಮಣಿಸಪ್ಪಳವಾಗಿ ಕೇಳಿಸಿದ್ದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್‌ ಅವರಿಗೆ. ಅತ್ಯಾಧುನಿಕ ಸ್ಮಾರ್ಟ್‌ ಫೋನ್‌ಗಳಲ್ಲಿ ಕಾರ್ಯಾಚರಿಸುವ ವಾಟ್ಸಪ್‌ ವೇದಿಕೆಯಲ್ಲಿ ಅವರು ಯಕ್ಷಮಿತ್ರರನ್ನು ಕಟ್ಟಿಕೊಂಡರು. ವೈದ್ಯರತ್ನ ಕಾಮತರ ಈ ಗುಂಪಿನಲ್ಲಿ ಯಕ್ಷಗಾನದ ಗಾನ, ನಾಟ್ಯ, ವಾಚಿಕ, ಆಹಾರ್ಯ ಎಲ್ಲ ವಿಷಯಗಳ ಬಗೆಗೂ ಪ್ರಬುದ್ಧ ಮಾಹಿತಿ ದೊರೆಯುತ್ತದೆ. ಯಕ್ಷಗಾನದ ಜ್ಞಾನ ಶರಧಿಯಲ್ಲಿ ತಂಬಿಗೆ ಹಿಡಿದು ತುಂಬಿಸಿಕೊಳ್ಳಲು ಈ ಗುಂಪಿನಲ್ಲಿ ಇರುವ ಸದಸ್ಯರು 200. ಇಲ್ಲಿ ಹುಟ್ಟಿದ ಯಕ್ಷ ನವನೀತವನ್ನು ಈ ಸದಸ್ಯರು ಇತರ ಗ್ರೂಪ್‌ಗ್ಳ ಮೂಲಕ ಜಗತ್ತಿನ ವಿವಿಧೆಡೆಗೆ ಪಸರಿಸುತ್ತಿದ್ದಾರೆ.

ಇಲ್ಲಿ ಯಕ್ಷರಸಗ್ರಾಹಿಗಳಿಗೆ ಸಮೃದ್ಧ ಸಾಹಿತ್ಯದ ರಸದೌತಣ. ವಿದ್ಯಾರ್ಥಿಗಳಿಂದ ಹಿಡಿದು ವೈದ್ಯರವರೆಗೆ, ದಕ್ಷಿಣ ಕನ್ನಡದ ಸಣ್ಣ ಹಳ್ಳಿಯಿಂದ ಆರಂಭಿಸಿ ದುಬೈ, ಆಸ್ಟ್ರೇಲಿಯಾ, ಅಮೆರಿಕ ಮೊದಲಾದ ದೇಶಗಳವರೆಗೆ ಈ ಗುಂಪಿನ ಪರಿಧಿ ವ್ಯಾಪಿಸಿದೆ. ಪ್ರತಿನಿತ್ಯ ಯಕ್ಷಗಾನಕ್ಕೆ ಸಂಬಂಧಿಸಿದ ಸುದ್ದಿ, ಮಾಹಿತಿ, ಛಾಯಾಚಿತ್ರಗಳು, ಹಾಡುಗಳು, ವಿಡಿಯೋಗಳ ತುಣುಕುಗಳ ಹಂಚೋಣವಾಗುತ್ತಿರುತ್ತದೆ. ನಟೇಶ್‌ ವಿಟ್ಲ, ಕಿರಣ್‌ ವಿಟ್ಲ ಮೊದಲಾದವರ ಜತೆಗೆ ಸ್ವತಃ ಕಾಮತರೇ ಅದ್ಭುತ ಛಾಯಾಗ್ರಾಹಕ. ಅವರ ಸಂಗ್ರಹದಲ್ಲಿ ವೇಷಗಳ ಅಪೂರ್ವ ಚಿತ್ರಗಳಿವೆ, ಮುಖವರ್ಣಿಕೆಗಳ ಕುರಿತು ಮೊಗೆದಷ್ಟೂ ಮುಗಿಯದ ವೈವಿಧ್ಯಮಯ ಚಿತ್ರಗಳಿವೆ. ಹಗಲಿಡೀ ರೋಗಿಗಳ ಎದೆ ತೆರೆದು ಸಾಂತ್ವನ ನೀಡುವ ಡಾ| ಕಾಮತರು ರಾತ್ರಿಯಾಗುತ್ತಿದ್ದಂತೆಯೇ ಕೆಮರಾ ಹೆಗಲಿಗೇರಿಸಿ ಯಕ್ಷರಂಗದ ಮುಂದೆ ಕುಳಿತು ಬಿಡುವ ಅಪ್ಪಟ ಯಕ್ಷಗಾನಾಭಿಮಾನಿ. ಅದೆಷ್ಟೋ ಕಲಾವಿದರ ಪಾಲಿಗೆ ಕಾಮಧೇನು.

ಕೇವಲ ಚಿತ್ರ, ದೃಶ್ಯ, ಶ್ರಾವ್ಯಗಳನ್ನು ಹರಡುತ್ತಾ ಇರುವ ವಾಟ್ಸಪ್‌ ಗ್ರೂಪ್‌ಗ್ಳು ಹಲವಿವೆ. ಆದರೆ ಯಕ್ಷಮಿತ್ರ ಕೇವಲ ಅದಕ್ಕಷ್ಟೇ ಸೀಮಿತವಾಗದೆ ಏನಾದರೂ ಹೊಸತು, ಮಹತ್ತರವಾದುದನ್ನು ಮಾಡಬೇಕೆಂದು ಹೊರಟಿದೆ.

ಯಕ್ಷ ಸತ್ಸಂಗ

ಯಕ್ಷಮಿತ್ರ ಗ್ರೂಪ್‌ನ ಸದಸ್ಯರು ಜತೆ ಸೇರಿ ಇದೀಗ ಜುಲೈ 4ರಂದು ಕಟೀಲು ಪದವಿಪೂರ್ವ ಕಾಲೇಜಿನ ಶ್ರೀವಿದ್ಯಾ ಸದನದಲ್ಲಿ ಯಕ್ಷಸತ್ಸಂಗ ಎಂಬ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇದರಲ್ಲಿ ಯಕ್ಷಲೋಕದ ಅತ್ಯಪೂರ್ವ ಧ್ವನಿತಟ್ಟೆ ಬಿಡುಗಡೆ ಯಾಗಲಿದೆ. ವಾಟ್ಸಪ್‌, ಫೇಸ್‌ಬುಕ್‌ನಂತಹ ವೇದಿಕೆಗಳಲ್ಲಿ ಇರುವ ಡಾಟಾಗಳು ಚಿರಾಯುವಲ್ಲ. ಕಾಲ ಮುಂದೆ ಸರಿದಂತೆ ಅವಕ್ಕೂ ಸಾವಿದೆ. ಆದರೆ, ಅಂತಹ ಅಮೂಲ್ಯ ಮಾಹಿತಿ, ಚಿತ್ರ, ಧ್ವನಿಸಂಗ್ರಹ ನಾಶವಾಗದೆ ಮೂರ್ತರೂಪದಲ್ಲಿ ಬಹುಕಾಲ ನೆಲೆನಿಲ್ಲಬೇಕು, ಇನ್ನಷ್ಟು ಆಸಕ್ತರಿಗೆ ಒದಗಬೇಕು ಎಂಬ ಸದುದ್ದೇಶ ಇದರ ಹಿಂದಿದೆ. ಅಕ್ಷಯಕೃಷ್ಣ ಸಂಗ್ರಹಿಸಿ - ಸಂಯೋಜಿಸಿದ ಈ ಧ್ವನಿಸುರುಳಿ ಸುಮಾರು 40 ಭಾಗವತರ 350ಕ್ಕೂ ಮಿಕ್ಕಿದ ಹಾಡುಗಳನ್ನು, ಕರ್ಣರಂಜಕ ನಿರೂಪಣೆಯನ್ನು ಒಳಗೊಂಡಿದೆ. ಯಕ್ಷರಂಗದ ಸಾಧಕರಾದ ಕಿರಿಯ ಬಲಿಪರು, ಕೆ. ಗೋವಿಂದ ಭಟ್‌, ದಾಸನಡ್ಕ ರಾಮ ಕುಲಾಲ್‌ ಅವರಿಗೆ ಸಮ್ಮಾನ ನಡೆಯಲಿದೆ. ಯಕ್ಷಗಾನದಿಂದ ಮರೆಯಾದ, ಮರೆಯಾಗುತ್ತಿರುವ ಅಪೂರ್ವ ಪೂರ್ವರಂಗ ಪ್ರಾತ್ಯಕ್ಷಿಕೆ ನಡೆಯಲಿದೆ. ಯಕ್ಷಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಬಳಿಕ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಯಕ್ಷ ಕಲಾವಿದರಿಂದ ಲಕ್ಷ್ಮೀ, ಸೀತಾ, ಹಿಡಿಂಬಾ, ಪದ್ಮಾವತೀ ಕಲ್ಯಾಣ ಗಳೆಂಬ ಕಲ್ಯಾಣೋತ್ಸವ ಪ್ರಸಂಗ ಪ್ರದರ್ಶನ ನಡೆಯಲಿದೆ. ಇವೆಲ್ಲವೂ ವಾಟ್ಸಪ್‌ ಬಳಗದ ಗೆಳೆಯರ ಬೆಂಬಲದಿಂದ.

ಅಂದು ಸೆಪ್ಟೆಂಬರ್‌ 8, 2014. ನಾನು ವಾಟ್ಸಪ್‌ನಲ್ಲಿ ಒಂದು ಯಕ್ಷಗಾನ ಗ್ರೂಪ್‌ ಆರಂಭಿಸಿದೆ. ಅದೇ ಬಳಗ ಇಂದು ದೈತ್ಯಾಕಾರ ತಾಳಿ ಅಸಾಧಾರಣ ಮಟ್ಟಕ್ಕೆ ಬೆಳೆಯುತ್ತದೆ ಎಂದು ಕನಸು ಕೂಡ ಕಂಡಿರಲಿಲ್ಲ. ಆರಂಭದಲ್ಲಿ ನನಗೆ ಅಷ್ಟೊಂದು ಜನರ ಸಂಪರ್ಕವಿರಲಿಲ್ಲ. ಕೆಲವು ಮಿತ್ರರು, ಸಹೋದ್ಯೋಗಿ ವೈದ್ಯರು ಹಾಗೂ ವ್ಯವಹಾರಸ್ಥ ಉದ್ಯಮಿಗಳು -ಹೀಗೆ ಸುಮಾರು 15 ಜನರಷ್ಟೇ ಗ್ರೂಪ್‌ನಲ್ಲಿ ಇದ್ದದ್ದು. ಕೇವಲ ನಾನೊಬ್ಬನೇ ಯಕ್ಷ ಛಾಯಾಚಿತ್ರಗಳನ್ನು ಹಂಚಿಕೊಳ್ಳುವುದಕ್ಕಷ್ಟೇ ಸೀಮಿತವಾಗಿ ಏಕಮುಖವಾಗಿದ್ದ ಗುಂಪಿಗೆ ತಿರುವು ದೊರಕಿದ್ದು ಕಟೀಲು ಸಿತ್ಲ ರಂಗನಾಥ ರಾಯರು ಜತೆಯಾದಾಗ. ಅನಂತರ ರಾಮ್‌ಪ್ರಸಾದ್‌ ಅಮ್ಮೆನಡ್ಕ, ಸಮೀರ ದಾಮ್ಲೆ, ಉಲ್ಲಾಸ್‌ ಸಿ.ಕೆ., ಸುಧಾಕರ ಜೈನ್‌, ಲ.ನಾ.ಭಟ್‌ ಮೊದಲಾದವರು ವೇದಿಕೆಯಲ್ಲಿ ಜತೆಯಾದರು. ಕ್ರಮೇಣ ಗಣನೀಯವಾಗಿ ಏರಿದ ಸದಸ್ಯರ ಸಂಖ್ಯೆ ಇಂದು 200ರ ಗಡಿ ತಲುಪಿ ಅತಿ ಬಲಿಷ್ಠ ಬಳಗವಾಗಿ ಬೆಳೆದಿದೆ.

`` ಪೂರ್ಣಪ್ರಮಾಣದ ವೈದ್ಯನಾಗಿ ಮಣಿಪಾಲದಿಂದ ಮಂಗಳೂರಿಗೆ ಬಂದು ನೆಲೆಗೊಂಡ ನನ್ನೊಳಗೆ ಯಕ್ಷಗಾನ ಅಭಿಮಾನದ ಹಕ್ಕಿ ಗರಿಬಿಚ್ಚಿತು. ಪರಿಸರದಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನಗಳ ವೀಕ್ಷಣೆಯ ಹವ್ಯಾಸ ಮುಂದುವರಿಸಿದೆ, ವಿಭಿನ್ನ ವೇಷಗಳ ಛಾಯಾಚಿತ್ರ ಗ್ರಹಣ, ಸಂಗ್ರಹ ನಡೆದೇ ಇದೆ. ಬಣ್ಣದ ವೇಷಗಳ ಬಗ್ಗೆ ನನಗೆ ಇಂಗದ ಬೆರಗು. ಈಗ ವಾಟ್ಸಪ್‌ ವೇದಿಕೆಯಲ್ಲಿ ನನ್ನ ಜತೆಗೆ ಅಮ್ಮೆನಡ್ಕ, ಹರಿಪ್ರಸಾದ್‌, ನಾಗೇಶ್‌ ಕೆ. ಎಸ್‌., ಶಾಂತಾರಾಮ ಕುಡ್ವ ಕ್ರಿಯಾಶೀಲರಾಗಿದ್ದಾರೆ. ಈ ಉನ್ನತಿಯ ಪ್ರೇರಣಾ ಶಕ್ತಿ ಕಟೀಲು ಹರಿನಾರಾಯಣ ಆಸ್ರಣ್ಣರು ವೇದಿಕೆಗೆ ದೊರೆತ ಶ್ರೀ ಕಟೀಲು ಭ್ರಮರಾಂಬೆಯ ಅನುಗ್ರಹ ಪ್ರಸಾದ. ``
- ಡಾ| ಪದ್ಮನಾಭ ಕಾಮತ್‌





ಕೃಪೆ : udayavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Nagaraj Shetty(2/4/2016)
Nice Article. I am ready to join the yakshamitra group can you please tell me to whom i need to give my no?. Admin details plz
Ranjan Rao(7/7/2015)
Hello, Please send the details on how to join this group to me as well. thx
Prashantha As(7/3/2015)
Hi, I am interested to join this WhatsApp Group. Could you please send me details of how can i join this group Thanks in advance. Thanks & Regards, Prashantha As




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ